Sunday, 23 April 2017

ಕಲಿಗಾಲ ಸ್ವಾಮಿ... ಕಲಿಗಾಲ...

ಜನುಮ ಜನುಮಾಂತರದ ಕರ್ಮಗಳ ಸರಮಾಲೆ..
ಬಂದಿಹುದು ಮಾನವ ಜನ್ಮಕ್ಕೆ ಕರೆಯೋಲೆ..
ಮೊದಲಡಗಿ ತಾಯಿಯ ಗರ್ಭದ ಮರೆಯಲ್ಲಿ..
ಮರುಹುಟ್ಟು ಪಡೆವ ಜೀವ ತಂತಾಯಿಯ ಮಡಿಲಲ್ಲಿ..

ಚಾತಕಪಕ್ಷಿಯಂತೆ ಕಾದು ಜನನದ ಘಳಿಗೆಗೆ..
ತಯಾರಾಗುವ ಜಾತಕ ನಾಳೆಯ ಒಳಿತಿಗೆ..
ಬದಲಾಗುತ್ತಿದ್ದರೂ ಈಗಿನ ಪೀಳಿಗೆ..
ಬಿಟ್ಟಿಲ್ಲ ಮಾತ್ರ ಜ್ಯೋತಿಷ್ಯದ ನಂಬುಗೆ..

ಕಲಿಗಾಲವಿದು ಸ್ವಾಮೀ ಕಲಿಗಾಲ..

ಕಣ್ಣ ಎದುರಿನ ದಿಟವ ನಂಬದ ಈತ..
ಕಣ್ಣಿಗೊತ್ತಿಕೊಳ್ಳುವನು ಮೂಢನಂಬಿಕೆಯ ಭೂತ..
ಇದಕೆ ಮಾಡಿಯೂ ಸಾಲ, ಹೊಂಡಕ್ಕೆ ಬಿದ್ದಾತ..
ಹೇಳಿದರೂ ಕೇಳದ ಈತ, ಸಮಾಜದ ಪೆಡಂಭೂತ..

ಕಲಿಗಾಲವಿದು ಸ್ವಾಮೀ ಕಲಿಗಾಲ..

ಶಿಕ್ಷಣವು ನಡೆಯಿತಿದೆ ಹಣದ ಹಾಸಿನ ಮೇಲೆ..
ಎಲ್ಲಿ ನೋಡಿದರಲ್ಲಿ ಕಾಂಚಾಣನದೇ ಲೀಲೆ..
ಈ ಮುಂಚೆ ಹೀಗಿತ್ತು ಸರಕಾರದ ಘೋಷಣೆ..
ಎಲ್ಲರೂ ಕಲಿಯೋಣ.. ಎಲ್ಲರೂ ಬೆಳೆಯೋಣ..
ಪರಿಸ್ಥಿತಿ ನೋಡಿದರೆ ಬದಲಾಗಿದೆ ಘೋಷಣೆ..
ಹಣವನ್ನು ಕಕ್ಕೋಣ.. ಶಿಕ್ಷಣವ ಪಡೆಯೋಣ..

ಕಲಿಗಾಲವಿದು ಸ್ವಾಮೀ ಕಲಿಗಾಲ..

ಬಡವರಿಗೆ ಸೂರಿಲ್ಲ.. ಸಿರಿತನಕೆ ಕೊನೆಯಿಲ್ಲ..
ಸತ್ತು ಬದುಕುವ ರೈತ.. ಅನ್ನವನು ಬೆಳೆವಾತ..
ತಿಂದುಳಿದದ್ದನ್ನೆಸೆದು ತೇಗುವ ಸಿರಿವಂತ..
ಕಲಿಗಾಲವಿದು ಸ್ವಾಮೀ ಕಲಿಗಾಲ..


Thursday, 17 September 2015

> ಶುಭರಾತ್ರಿ...

ಮೂಡಣದಿ ದಿನಕರನು ಆರತಿಯ ಬೆಳಗುತಿರೆ
ಭೂತಾಯಿಯ ಮಡಿಲಲ್ಲಿ ಮರುಹುಟ್ಟುವ ಜೀವಸೆಲೆ
ಹಸಿರೆಲೆಯ ತುದಿಯಿಂದ ಇಬ್ಬನಿಯು ಜಾರುತಿರೆ
ಬಿತ್ತಾ ಹನಿಯು ಮರಿ ಮಿಡತೆಯ ಮುಡಿಯ ಮೇಲೆ...ಮಾಮರದ ಮರೆಯಿಂದ ಕೋಗಿಲೆಯ ದನಿಕೇಳಿ
ಶುರುವಿಟ್ಟವು ಬೇರೆಲ್ಲ ಪಕ್ಷಿಗಳು ಚಿಲಿಪಿಲಿ..
ಕೊಟ್ಟಿಗೆಯ ಮೂಲೆಯಲಿ ಅಂಬಾ ಎನ್ನುತ್ತಿದ್ದ ಆ ಕರು
ತಾಯ ಮಡಿಲ ಸೇರುವ ತವಕವ ತಡೆಯುವರಾರು...

ಕ್ಷಣಕಳೆದಂತೆ ಎಂದಿನ ದಿನಚರಿ ಆರಂಭ
ಪ್ರತಿದಿನವೂ ಅದೇ ಕೆಲಸದ ಪ್ರತಿಬಿಂಬ
ಮಾನವನ ಗುರಿಯು ಗರಿಯ ನೋಟುಗಳ ಕಂತೆ..
ಪ್ರಾಣಿ ಪಕ್ಷಿಗಳಿಗೆ ಇಂದಿನ ಆಹಾರದ ಚಿಂತೆ...

ದಿನವೆಲ್ಲ ಕಾರ್ಯದಲಿ ತೊಡಗಿ ಸೊರಗುವ ಜೀವಿ
ಸಂಜೆಯಾದಂತೆ ಬೇಗ ಮನೆಗೆ ತೆರಳುವ ಭೋಗಿ...
ಧೂಳೆಬ್ಬಿಸುತ ಗೋಧೂಳಿಯಲಿ ಹಟ್ಟಿಗೆ ಮರಳುವ ಆಕಳು...
ಗೂಡಿನಡೆ ಗುಂಪಾಗಿ ತೇಲಿಬರುವ ಬಾನಾಡಿಗಳು...


ದಣಿವರಿದ ಜೀವದ ವಿಶ್ರಾಂತಿಯ ಬೇಡಿಕೆ..
ಕಣ್ಣ ಮುಚ್ಚಿರಲು ಗಾಢ ನಿದಿರೆಯ ಹೊದಿಕೆ
ತಾರೆಗಳ ನಡುವಲ್ಲಿ ಬೆಳಗುತಿರೆ ಚಂದಿರನು..
ಕಾಣು ನೀ ನಿದಿರೆಯಲಿ ಸವಿಯಾದ ಸ್ವಪ್ನವನು…

ಇಂತಿ,
ನಾಗೇಶ್ :) ...

Friday, 31 July 2015

ಮಳೆಗಾಲದ ಮುಂಜಾನೆ....

ಮನದಲ್ಲಿ ಮಾನಿನಿಯು ಮೌನದಲಿ ಮಲಗಿರಲು
ಮಾಮರದ ಮರೆಯಲ್ಲಿ ದನಿಯೊಂದು ಮೂಡಿತ್ತು
ಮೂಡಣದಿ ಮುಂಜಾನೆ ರವಿಮಾಮ ಮೇಲೆದ್ದಿರೆ
ಮೋಡದ ಮುಸುಕಲ್ಲಿ ಬಿಸಿಲು ಮಂಕಾಗಿತ್ತು

ಮಂದವಾಗಿದೆ ಬಾನಿದು ಇಂದು..
ಅಂದವಾಗಿದೆ ಮೋಡವು ಬಂದು..
ಮೋಡದ ಎಡೆಯಿಂದ ಕಿರಣದ ಅಲೆಯೊಂದು..
ಬಂದು ಬಿದ್ದಿರೆ ಮನದ ಕದದ ಮೇಲಿಂದು...
ನೋಡುತಿರೆ ಮೂಡಣದಿ ದಿನಕರನ ದಿನಚರಿಯ..
ಹರಿಣದಂತೆ ಎದೆಯಲ್ಲಿ ಕುಣಿದಾಡುವ ಹೃದಯ..

ಮಳೆಗಾಲದ ಮಾಸವಿದು ಮೋಡಗಳು ಮಾಮೂಲು..
ಕಾರ್ಮೊಡವು ಮೇಲೆದ್ದಿರೆ ಮಳೆಯ ಮೆಲುಕು ಮನದಲ್ಲೂ..
ಮಳೆಯ ಆಗಮನಕೆ ಮೋಡದೆಡೆ ಮುಖ ಮಾಡಿರಲು..
ಮನದ ಮನೆಯಲ್ಲಿ ಮೆಲ್ಲನೆ ಕಮರಿತ್ತು ಮಂಪರು..

ಕನಸುಗಳ ಕಾಡಲ್ಲಿ ಕೊಂಚ ಕೊರೆದ ಕಲ್ಲಿನ ಕೆಳಗೆ ಕುಳಿತು
ಕತ್ತನೆತ್ತಲು ಕಂಡೆ ಕಾಮನಬಿಲ್ಲ ಕೈಚಳಕ....
ಕಾರ್ಮೋಡದ ಕಡಿದಾದ ಕಣಿವೆಯಲಿ
ಇಣುಕಿ ಕಿರುನಗುವ ಓಕುಳಿಯ ಕಂಡು ಮೈಪುಳಕ...

ಕಾರ್ಮೋಡದ ಮರೆಯಿಂದ ಮಳೆಹನಿಯು
ಕಾಮನಬಿಲ್ಲಲ್ಲಿ ಮುಳುಗೆದ್ದು ಧುಮುಕುತಿರೆ
ಮರದೆಲೆಯಡಿ ಮೊರೆಯಿಡುತ್ತಿತ್ತೊಂದು ಮರಿಹಕ್ಕಿಯು 
ತನ್ನಮ್ಮ ಮನೆಗಿನ್ನೂ ಮರಳಿಲ್ಲವೆಂದು...

ಇಂತಿ,
ನಾಗೇಶ್ :)

Tuesday, 9 December 2014

> ಮಲೆನಾಡ ಮಳೆ ...

ಋತುವಿದು ವಸಂತ...
ಜಡಿ ಮಳೆಯ ಸುರಿತ...
ಸಾಗರದಿ ಅಲೆಗಳ ಭೋರ್ಗರೆತ...
ವರುಣನ ಆರ್ಭಟ ಅವ್ಯಾಹತ...
                            
ಮಾಡಿ ಮೋಡದ ನಡುವೆ ಕಿಟಕಿ
ನೋಡುವನು ಸೂರ್ಯನು ಭೂಮಿಯನ್ನು ಇಣುಕಿ...
ಕಾರ್ಮೋಡದ ನಡುವೆ ವಜ್ರದಂತೆ ಹೊಳೆವ...
ಮೋಡದಿಂದ ಹೊರಬಂದು ಪುನಃ ಬೆಳಕ ಕೊಡುವ..

ಮಳೆಯು ಬರುತಿರಲು
ಮಳೆಯಲಿ ನೆನೆದಿರಲು
ಮುದಗೊಳುವುದು ಮನಸು
ಮೋಡದಂತೆ ಬಾನಲಿ ತೇಲುವುದು ಮನಸು
ಮೋಡ ಕರಗಿ ಮಳೆಯಾಗುವಂತೆ
ಕುಣಿಯುವುದೀ ಮನಸು... 

ಆದಾಗ ಮೊಗಕೆ ಮಳೆಹನಿಯ ಚುಂಬನ
ರೋಮಾಂಚನಗೊಳ್ಳುವುದು ಮೈಮನ...
ಬಾನಲ್ಲಿ ಕಪ್ಪೇರಲು
ಕೆಲವೊಮ್ಮೆ ಕಾಣುವುದು ಕಾಮನಬಿಲ್ಲು...
 

ಭಾರಿ ಮಳೆ ಬೀಳಲು
ಉಕ್ಕುವುದು ಕಡಲ ಒಡಲು...
ಹುಣ್ಣಿಮೆಗೆ ಮೇಲೇರಿದಾಗ ಚಂದಿರ
ನೋಡಬೇಕು ಸಾಗರದ ಅಬ್ಬರ...
ಶಾಂತವಾದಾಗ ಸಾಗರ
ನೋಡಲು ನಯನ ಮನೋಹರ...

ಮಲೆನಾಡಿನ ಜಡಿಮಳೆಯಲ್ಲಿ
ಮುದದಿಂದ ನೆನೆದಲ್ಲಿ
ಮಲಗಬೇಕು ಮನೆಯಲ್ಲಿ
ಬಳಲುತ್ತಾ ಜ್ವರದಲ್ಲಿ.....

ಇಂತಿ,
ನಾಗೇಶ್ ... :)

Tuesday, 16 September 2014

> ಬಾಳೆಂಬ ನಾಟಕ

ಬದುಕೆಂಬುದೊಂದು ನಾಟಕ...
ನಿನ್ನ ನಾಟಕಕೆ ನೀನೆ ನಾಯಕ...
ನಿಷ್ಠೆಯಿಂದ ಮಾಡು ನಿನ್ನ ಕಾಯಕ...
ಆಗುವೆ ನೀನೊಬ್ಬ ಮಹಾನ್ ಸಾಧಕ...

ಜೀವನದಲಿ ಆರೋಗ್ಯವಾಗಿರಬೇಕೆಂದರೆ...
ಸರಿಯಾಗಿ ಮಾಡು ಊಟ-ನಿದ್ರೆ...
ಒದ್ದಾಡಬೇಡ ದಿನವಿಡೀ...
ಕಳೆದುಕೊಳ್ಳುವೆ ಬದುಕಲಿ ನೆಮ್ಮದಿ...

ಹಿರಿಯರು ಹೇಳಿದ್ದಾರೆ...
ಶಕ್ತಿಗಿಂತ ಯುಕ್ತಿ ಮೇಲು...
ಬುದ್ಧಿಯನು ಉಪಯೋಗಿಸಿದರೆ...
ನಿನ್ನದಾಗುವುದು ಗೆಲುವು...

ಎಲ್ಲರನು ಪ್ರೀತಿಸು...
ಎಲ್ಲರಿಗೂ ಪ್ರೀತಿ ಕೊಡು...
ಪರರ ಕಷ್ಟವ ಆಲಿಸು...
ಆಲಿಸಿ ಕೈಲಾದ ಸಹಾಯ ಮಾಡು...

ನೀ ಮಾಡುವ ಒಂದು ಉಪಕಾರ...
ಪರರ ಜೀವನಕಾಗಬಹುದು ಆಧಾರ...
ಅವರ ಸಮಸ್ಯೆಗೆ ಸಿಕ್ಕರೆ ಪರಿಹಾರ...
ಸಾರ್ಥಕವು ನಿನ್ನ ಪರೋಪಕಾರ...

ಮನದಲ್ಲಿ ನಗುವಿರಲಿ...


ಇಂತಿ,
ನಾಗೇಶ್ :) ....

Monday, 8 September 2014

> ಪ್ರಕೃತಿ ನಾಶ ...

ಈ ಮಳೆಗಾಲದೊಳು....
ಕಪ್ಪೇರುವುದು ಮುಗಿಲು...
ಬಡಿದಾಗ ಗುಡುಗು ಸಿಡಿಲು...
ಅತ್ತಿತ್ತ ಓಡಾಡುವ ಪುಟ್ಟ ಅಳಿಲು...
ಮೊದಲ ಮಳೆ ಹನಿ ಧರೆಗೆ ತಾಕಲು..
ಮಳೆಗೆ ಮುಖವೊಡ್ಡುವ ಆಸೆ ಮನದೊಳು...

ಮಳೆಗಾಲದಲಿ ಈ ಧರೆ...
ಉಡುವುದು ಹಸಿರು ಸೀರೆ...
ಎಲ್ಲೆಲ್ಲೂ ಕಾಣುವ ಹಚ್ಚ ಹಸಿರು..
ಭೂಮಂಡಲದ ಜೀವಿಗಳಿಗೆ ಇದೇ ಉಸಿರು...
ನಾಶಗೊಂಡರೆ ಈ ಹಸಿರು...
ನಿಲ್ಲುವುದು ಎಲ್ಲರ ಉಸಿರು...
ಎಲೈ ದುರುಳ ಸ್ವಾರ್ಥಿ ಮಾನವನೇ...
ನಿನ್ನ ನಾಶಕೆ ಮುನ್ನುಡಿ ಬರೆದಿರುವೆ ನೀನೆ...
ಪೂರೈಸಲು ಸಿರಿವಂತನಾಗುವ ನಿನ್ನ ಆಸೆಯ...
ಬಲಿಕೊಡಬೇಕೆ ಈ ಪ್ರಕೃತಿಯ ??


ಇಂತಿ,
ನಾಗೇಶ್ :) ...

Friday, 5 September 2014

> ಮಲೆನಾಡ ಹಸಿರು

ಈ ಬೃಹತ್ ಬ್ರಹ್ಮಾಂಡದೊಳು...
ಅಸಂಖ್ಯಾತ ಜೀವಿಗಳು...
ಒಂದೊಂದು ಜೀವಿಯಲ್ಲೂ...
ಬಹಳಷ್ಟು ವಿಶೇಷತೆಗಳು...

ಮುಂಜಾನೆಯಲಿ ನಿದ್ದೆಯಿಂದ ಎದ್ದಾಗ...
ಕೇಳುವುದು ಕೋಗಿಲೆಯ ಕುಹೂ ಕುಹೂ ರಾಗ...
ಕೋಗಿಲೆಯ ಗಾನದೊಡನೆ...
ಇದ್ದರೆ ನವಿಲಿನ ನರ್ತನೆ...
ನೋಡುತಿರಲು ಮೆಲ್ಲನೆ...
ಸೆಳೆಯಬಲ್ಲುದು ಎಲ್ಲರ ಗಮನವನೆ...

ಹಟ್ಟಿಯಿಂದ ಹೊರಬರುವ ಆಕಳು...
ಅವುಗಳ ಹಿಂದೆಯೇ ಬರುವ ಪುಟ್ಟ ಕರುಗಳು...
ಇಂಥ ದೃಶ್ಯ ಪಟ್ಟಣದಲಿ ಸಿಗದು..
ಅದಕೆ ಹೋಗಬೇಕು ಕರಾವಳಿ-ಮಲೆನಾಡು...

ಅಲ್ಲಿ ಬೆಳೆದು ನಿಂತಿರುವುದು ಹಸಿರು ಪೈರು...
ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು...
ಸಿಗುವುದಲ್ಲಿ ಶುದ್ಧ ಗಾಳಿ-ನೀರು...
ಪ್ರಸಿದ್ಧವಿಲ್ಲಿ ನಾಟಿ ಕೋಳಿ ಸಾರು...


ಇಂತಿ,
ನಾಗೇಶ್ :) ...