Tuesday, 9 December 2014

> ಮಲೆನಾಡ ಮಳೆ ...

ಋತುವಿದು ವಸಂತ...
ಜಡಿ ಮಳೆಯ ಸುರಿತ...
ಸಾಗರದಿ ಅಲೆಗಳ ಭೋರ್ಗರೆತ...
ವರುಣನ ಆರ್ಭಟ ಅವ್ಯಾಹತ...
                            
ಮಾಡಿ ಮೋಡದ ನಡುವೆ ಕಿಟಕಿ
ನೋಡುವನು ಸೂರ್ಯನು ಭೂಮಿಯನ್ನು ಇಣುಕಿ...
ಕಾರ್ಮೋಡದ ನಡುವೆ ವಜ್ರದಂತೆ ಹೊಳೆವ...
ಮೋಡದಿಂದ ಹೊರಬಂದು ಪುನಃ ಬೆಳಕ ಕೊಡುವ..

ಮಳೆಯು ಬರುತಿರಲು
ಮಳೆಯಲಿ ನೆನೆದಿರಲು
ಮುದಗೊಳುವುದು ಮನಸು
ಮೋಡದಂತೆ ಬಾನಲಿ ತೇಲುವುದು ಮನಸು
ಮೋಡ ಕರಗಿ ಮಳೆಯಾಗುವಂತೆ
ಕುಣಿಯುವುದೀ ಮನಸು... 

ಆದಾಗ ಮೊಗಕೆ ಮಳೆಹನಿಯ ಚುಂಬನ
ರೋಮಾಂಚನಗೊಳ್ಳುವುದು ಮೈಮನ...
ಬಾನಲ್ಲಿ ಕಪ್ಪೇರಲು
ಕೆಲವೊಮ್ಮೆ ಕಾಣುವುದು ಕಾಮನಬಿಲ್ಲು...
 

ಭಾರಿ ಮಳೆ ಬೀಳಲು
ಉಕ್ಕುವುದು ಕಡಲ ಒಡಲು...
ಹುಣ್ಣಿಮೆಗೆ ಮೇಲೇರಿದಾಗ ಚಂದಿರ
ನೋಡಬೇಕು ಸಾಗರದ ಅಬ್ಬರ...
ಶಾಂತವಾದಾಗ ಸಾಗರ
ನೋಡಲು ನಯನ ಮನೋಹರ...

ಮಲೆನಾಡಿನ ಜಡಿಮಳೆಯಲ್ಲಿ
ಮುದದಿಂದ ನೆನೆದಲ್ಲಿ
ಮಲಗಬೇಕು ಮನೆಯಲ್ಲಿ
ಬಳಲುತ್ತಾ ಜ್ವರದಲ್ಲಿ.....

ಇಂತಿ,
ನಾಗೇಶ್ ... :)

Tuesday, 16 September 2014

> ಬಾಳೆಂಬ ನಾಟಕ

ಬದುಕೆಂಬುದೊಂದು ನಾಟಕ...
ನಿನ್ನ ನಾಟಕಕೆ ನೀನೆ ನಾಯಕ...
ನಿಷ್ಠೆಯಿಂದ ಮಾಡು ನಿನ್ನ ಕಾಯಕ...
ಆಗುವೆ ನೀನೊಬ್ಬ ಮಹಾನ್ ಸಾಧಕ...

ಜೀವನದಲಿ ಆರೋಗ್ಯವಾಗಿರಬೇಕೆಂದರೆ...
ಸರಿಯಾಗಿ ಮಾಡು ಊಟ-ನಿದ್ರೆ...
ಒದ್ದಾಡಬೇಡ ದಿನವಿಡೀ...
ಕಳೆದುಕೊಳ್ಳುವೆ ಬದುಕಲಿ ನೆಮ್ಮದಿ...

ಹಿರಿಯರು ಹೇಳಿದ್ದಾರೆ...
ಶಕ್ತಿಗಿಂತ ಯುಕ್ತಿ ಮೇಲು...
ಬುದ್ಧಿಯನು ಉಪಯೋಗಿಸಿದರೆ...
ನಿನ್ನದಾಗುವುದು ಗೆಲುವು...

ಎಲ್ಲರನು ಪ್ರೀತಿಸು...
ಎಲ್ಲರಿಗೂ ಪ್ರೀತಿ ಕೊಡು...
ಪರರ ಕಷ್ಟವ ಆಲಿಸು...
ಆಲಿಸಿ ಕೈಲಾದ ಸಹಾಯ ಮಾಡು...

ನೀ ಮಾಡುವ ಒಂದು ಉಪಕಾರ...
ಪರರ ಜೀವನಕಾಗಬಹುದು ಆಧಾರ...
ಅವರ ಸಮಸ್ಯೆಗೆ ಸಿಕ್ಕರೆ ಪರಿಹಾರ...
ಸಾರ್ಥಕವು ನಿನ್ನ ಪರೋಪಕಾರ...

ಮನದಲ್ಲಿ ನಗುವಿರಲಿ...


ಇಂತಿ,
ನಾಗೇಶ್ :) ....

Monday, 8 September 2014

> ಪ್ರಕೃತಿ ನಾಶ ...

ಈ ಮಳೆಗಾಲದೊಳು....
ಕಪ್ಪೇರುವುದು ಮುಗಿಲು...
ಬಡಿದಾಗ ಗುಡುಗು ಸಿಡಿಲು...
ಅತ್ತಿತ್ತ ಓಡಾಡುವ ಪುಟ್ಟ ಅಳಿಲು...
ಮೊದಲ ಮಳೆ ಹನಿ ಧರೆಗೆ ತಾಕಲು..
ಮಳೆಗೆ ಮುಖವೊಡ್ಡುವ ಆಸೆ ಮನದೊಳು...

ಮಳೆಗಾಲದಲಿ ಈ ಧರೆ...
ಉಡುವುದು ಹಸಿರು ಸೀರೆ...
ಎಲ್ಲೆಲ್ಲೂ ಕಾಣುವ ಹಚ್ಚ ಹಸಿರು..
ಭೂಮಂಡಲದ ಜೀವಿಗಳಿಗೆ ಇದೇ ಉಸಿರು...
ನಾಶಗೊಂಡರೆ ಈ ಹಸಿರು...
ನಿಲ್ಲುವುದು ಎಲ್ಲರ ಉಸಿರು...
ಎಲೈ ದುರುಳ ಸ್ವಾರ್ಥಿ ಮಾನವನೇ...
ನಿನ್ನ ನಾಶಕೆ ಮುನ್ನುಡಿ ಬರೆದಿರುವೆ ನೀನೆ...
ಪೂರೈಸಲು ಸಿರಿವಂತನಾಗುವ ನಿನ್ನ ಆಸೆಯ...
ಬಲಿಕೊಡಬೇಕೆ ಈ ಪ್ರಕೃತಿಯ ??


ಇಂತಿ,
ನಾಗೇಶ್ :) ...

Friday, 5 September 2014

> ಮಲೆನಾಡ ಹಸಿರು

ಈ ಬೃಹತ್ ಬ್ರಹ್ಮಾಂಡದೊಳು...
ಅಸಂಖ್ಯಾತ ಜೀವಿಗಳು...
ಒಂದೊಂದು ಜೀವಿಯಲ್ಲೂ...
ಬಹಳಷ್ಟು ವಿಶೇಷತೆಗಳು...

ಮುಂಜಾನೆಯಲಿ ನಿದ್ದೆಯಿಂದ ಎದ್ದಾಗ...
ಕೇಳುವುದು ಕೋಗಿಲೆಯ ಕುಹೂ ಕುಹೂ ರಾಗ...
ಕೋಗಿಲೆಯ ಗಾನದೊಡನೆ...
ಇದ್ದರೆ ನವಿಲಿನ ನರ್ತನೆ...
ನೋಡುತಿರಲು ಮೆಲ್ಲನೆ...
ಸೆಳೆಯಬಲ್ಲುದು ಎಲ್ಲರ ಗಮನವನೆ...

ಹಟ್ಟಿಯಿಂದ ಹೊರಬರುವ ಆಕಳು...
ಅವುಗಳ ಹಿಂದೆಯೇ ಬರುವ ಪುಟ್ಟ ಕರುಗಳು...
ಇಂಥ ದೃಶ್ಯ ಪಟ್ಟಣದಲಿ ಸಿಗದು..
ಅದಕೆ ಹೋಗಬೇಕು ಕರಾವಳಿ-ಮಲೆನಾಡು...

ಅಲ್ಲಿ ಬೆಳೆದು ನಿಂತಿರುವುದು ಹಸಿರು ಪೈರು...
ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು...
ಸಿಗುವುದಲ್ಲಿ ಶುದ್ಧ ಗಾಳಿ-ನೀರು...
ಪ್ರಸಿದ್ಧವಿಲ್ಲಿ ನಾಟಿ ಕೋಳಿ ಸಾರು...


ಇಂತಿ,
ನಾಗೇಶ್ :) ...

Monday, 25 August 2014

> ಹಿತನುಡಿ - 4

ಕೋಟಿ ಕಿರಣಗಳ ಒಡೆಯ...
ಭೂಮಿಗೆ ಬೆಳಕ ಕೊಡುವ ಸೂರ್ಯ...
ಅವನುದಯವಾಗುವುದು ಅನುದಿನ...
ಬೆಳಗುವನು ಭೂಮಿಯ ಕಣ ಕಣ...

ದಿನವಿಡೀ ಮಾಡಿ ಕೆಲಸವ...
ಬಳಲಿ ಬೆಂಡಾಗುವ ಮಾನವ...
ದಿನಾಂತ್ಯಕ್ಕೆ ವಿಶ್ರಾಂತಿಯ ಬಯಸುವನು...
ಅದಕಾಗಿ ನಿದ್ದೆಯ ಮೊರೆ ಹೋಗುವನು...

ಉದಯಿಸುತ್ತಿದ್ದಂತೆ ಸೂರ್ಯ ಬಾನಲ್ಲಿ...
ಕೇಳುವುದು ಹಕ್ಕಿಗಳ ಚಿಲಿಪಿಲಿ...
ಕಣ್ಣ ಮೇಲೆ ಬೀಳಲು ಸೂರ್ಯನ ಕಿರಣ...
ತೆರೆಯಲಾಗದು ನಮ್ಮ ನಯನ...
ಮೆಲ್ಲನೆ ತೆರೆದು ಅರ್ಧ ಕಣ್ಣನ್ನ...
ವಾಪಾಸು ಮಲಗುವೆವು ನೋಡಿ ಸಮಯವನ್ನ...

ಬಿಡು ನೀ ಹಾಳು  ಆಲಸ್ಯ...
ಎದ್ದು ಮಾಡು ನಿನ್ನಯ ಕೆಲಸ...
ಪ್ರತಿಯೊಂದರಲ್ಲೋ ಇರುವುದು ಸ್ವಾರಸ್ಯ...
ತಿಳಿದರೆ ಪಡುವೆ ನೀ ಸಂತಸ...
ಪ್ರತಿಯೊಂದರಲ್ಲೂ ಹುಡುಕು ಹೊಸತೊಂದನ್ನು..
ಆಗ ಇಷ್ಟಪದುವೆ ನಿನ್ನ ಜೀವನವನ್ನು..
ನಿನ್ನ ಜೀವನ ನಿನಗಾದರೆ ಇಷ್ಟ...
ಸಾಗಿಸಲು ಜೀವನವಾಗದು ಕಷ್ಟ..

ಇಷ್ಟವಾದುದನ್ನು ಬಿಡದಿರು..
ಕಷ್ಟ ಬಂದಾಗ ಮನಸೋಲದಿರು...
ತಂದುಕೊಂಡರೆ ಸ್ವಲ್ಪ ಧೈರ್ಯ...
ಸಾಧಿಸಬಹುದು ನಿನ್ನ ಕಾರ್ಯ..

ಇಂತಿ,
ನಾಗೇಶ್ :) ....

Sunday, 3 August 2014

> ಮುಂಜಾನೆಯ ಕವನ _2


ತಿಳಿ ಮುಗಿಲ ಬಾನಿನಲಿ...
ರವಿ ಮೂಡುವ ಮೂಡಣದಲಿ..

ಕೋಗಿಲೆಯ ಕುಹೂ ಕುಹೂ ಗಾನ...
ನವಿಲಿನ ಸಂತಸದ ನರ್ತನ...
ಮುಗಿಯುತ್ತಿದ್ದಂತೆ ಧರಣಿಯ ಇರುಳು...
ಗೂಡಿನಿಂದ ಹೊರಬರುವ ಹಕ್ಕಿಗಳು...

ಆನಂದದಿಂದ ಹಾರುವ ದುಂಬಿ...
ಬದುಕುವುದು ಮಕರಂದವ ನಂಬಿ...
ಹಾರುವುದು ದುಂಬಿ ಹೂವಿಂದ ಹೂವಿಗೆ...
ಎಲ್ಲವೂ ಕೂಡಿಡುವುದು ಮುಂದಿನ ನಾಳೆಗೆ...

ಮಕರಂದವ ಕೂಡಿಡುವ ಜೇನು...
ಆಹಾ.. ಆ ಜೇನಿನ ಸವಿಯೇನು...
ನಮಗೆ ಸುಲಭವದು ಆ ಜೇನ ಸವಿಯಲು...
ಆದರೆ ಅದ ಒಟ್ಟುಗೂಡಿಸಲು....
ಓಡಾಡುವುದು ದುಂಬಿ ಹಗಲಿರುಳು...
ಕೂಡಿಡುವುದು ಜೇನನ್ನು ಗೂಡಿನೊಳು...

ಮಂಜಿನಿಂದ ಕೂಡಿರುವ ಮುಂಜಾನೆ...
ಚಳಿಯು ನಡುಗಿಸುವುದು ಮೈಯನ್ನೇ...
ಬಲು ತಂಪಾಗಿರುವ ವಾತಾವರಣ..
ಆ ಚಳಿಗೆ ಚಿಕ್ಕದಾಗುವ ನಯನ...
ಮಂಜು ಮುಸುಕನು ನೋಡಿ ಈ ಮನ...
ಮಾಡುವುದು ನವಿಲಿನಂತೆ ನರ್ತನ...

ಇಂತಿ,
ನಾಗೇಶ್... :) 

Monday, 28 July 2014

> ಆಧುನಿಕ ಜಗತ್ತು - 2


ಕುಳಿತು ಈ ಊರಲ್ಲಿ...
ಏನೆಂದು ನಾ ಬರೆಯಲಿ....
ಹಚ್ಚ ಹಸಿರು ಮರಗಳಿಲ್ಲ ಇಲ್ಲಿ...
ಕಟ್ಟಡಗಳೇ ಬೆಳೆಯುತಿಹುದಿಲ್ಲಿ...
ಮರ-ಗಿಡಗಳು ಬೆಳೆಯಲು ಜಾಗವೆಲ್ಲಿ...
ಹೀಗೆಯೇ ಮುಂದುವರಿದಲ್ಲಿ...
ಪರಿಣಾಮವ ಮಾನವನೇ ಅನುಭವಿಸಲಿ...

ಸಂಪೂರ್ಣ ಮರೆಯಾದಾಗ ಹಸಿರು...
ನಿಲ್ಲುವುದು ಮಾನವನ ಉಸಿರು...
ಎಷ್ಟೇ ಬಾಯಾರಿಕೆಯಾದರೂ...
ಕುಡಿಯಲು ಸಿಗದು ತೊಟ್ಟು ನೀರು...

ತಿನ್ನಲು ಸಿಗದು ಆಹಾರ...
ಎಲ್ಲೆಡೆ ಏಳುವುದು ಹಾಹಾಕಾರ...
ವಿಜ್ಞಾನಿಗಳು ನಡೆಸುತ್ತಿಹರು ಸಂಶೋಧನೆ...
ಏನೇ ಆದರೂ, ಮೂಲ ಪ್ರಕೃತಿ ತಾನೇ?...

ಕಂಡರೂ ಎಷ್ಟೇ ಬೆಳವಣಿಗೆ...

ಗೆಲ್ಲಲಾಗಲಿಲ್ಲ ಈವರೆಗೆ ...
ಅತಿಯಾಸೆ ಈ ಮಾನವಗೆ...
ಮಿತಿಯಿಲ್ಲ ಆ ಅತಿಯಾಸೆಗೆ...
ಭೇದಿಸ ಹೊರಟರೆ ಪ್ರಕೃತಿಯ ರಹಸ್ಯ...
ಖಂಡಿತ ಸರ್ವನಾಶವಾಗುವ ಈ ಮನುಷ್ಯ...

ಇಂತಿ,
ನಾಗೇಶ್ ... :)

Wednesday, 23 July 2014

> ಹಿತನುಡಿ- 3


ಪ್ರೀತಿ ಮಧುರ, ತ್ಯಾಗ ಅಮರ
ಎಂದರು ಭಟ್ಟರು ಮುಂಗಾರು ಮಳೆಯಲ್ಲಿ...
ಪ್ರೀತಿಯ ತೀರ ಆದಾಗ ದೂರ
ಮನವು ಮುಳುಗುವುದು ದುಃಖದ ಕಡಲಲ್ಲಿ...

ಹೃದಯದ ಪ್ರೀತಿ ದೂರವಾದಾಗ
ಬಯಸುವುದೀ ಮನ ಏಕಾಂತ....
ಬೇಸರದಿ ಕಡಲ ತಟದಲ್ಲಿ ಕುಳಿತಾಗ
ಕಾಣುವುದು ಸಾಗರದ ಅಲೆಗಳ ಮೊರೆತ...

ಸಾಗರದ ಅಲೆಗಳ ಸರದಿ
ಹೇಳುವುದು ನಮಗೆಲ್ಲ ಹಿತನುಡಿ...
ಅಲೆಗಳು ಬಂದು ಹೋದಂತೆ
ಶುಚಿಯಾಗುವುದು ತಟದ ಕಲ್ಮಶ...

ಈ ಜೀವನವೂ ಅದರಂತೆ
ಬರುವುದು ಒಂದಾದ ಮೇಲೊಂದು ಕಷ್ಟ...
ಎಲ್ಲ ಕಷ್ಟಗಳ ಎದುರಿಸಿದಂತೆ
ನಿನ್ನ ಮನವಾಗುವುದು ಬಲಿಷ್ಠ...

ಕೆಲವೊಮ್ಮೆ ಅಪ್ಪಳಿಸಿದಾಗ ಅಲೆಗಳು
ದಡಕ್ಕೆ ಬಂದು ಬೀಳುವ ಅದೆಷ್ಟೋ ವಸ್ತುಗಳು...
ಹಾಗೆಯೇ,
ಕಣ್ಣೀರು ಬರಿಸುವ ಕಹಿ ನೆನಪುಗಳು...
ಮುಗುಳ್ನಗು ತರಿಸುವ ಸಿಹಿ ನೆನಪುಗಳು...

ಸುಖ ಬಂದಾಗ ಹಿಗ್ಗದಿರು...
ಕಷ್ಟ ಬಂದಾಗ ಕುಗ್ಗದಿರು...
ಏನೇ ಕಷ್ಟ ಬಂದರೂ ಎದುರಿಸು...
ನಿನ್ನ ಗೆಲುವನ್ನು ಸಾಧಿಸು...

ಬೇವು- ಬೆಲ್ಲದಂತೆ ನಮ್ಮ ಜೀವನ...
ನೋವು-ನಲಿವಿನ ಸಮಾಗಮ...
ಏನೇ ಆದರೂ ಖುಷಿಪಡು ಅನುದಿನ...
ಕಷ್ಟ ಬಂದಾಗ ಪ್ರಾರ್ಥಿಸು ಆ ಭಗವಂತನ...

ಭಗವಂತನೊಬ್ಬ ಎಲ್ಲವನ್ನು ಮೇಲಿನಿಂದ ನೋಡುವನು..
ಕಷ್ಟ-ಸುಖಗಳ ತಕ್ಕಡಿಯ ಸರಿಯಾಗಿ ತೂಗುವನು...
ನೀಡುವನು ಕಷ್ಟ-ಸುಖದ ಸರಿಯಾದ ಪಾಲು...
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು....

ಇಂತಿ,
ನಾಗೇಶ್ ... :)

Tuesday, 15 July 2014

> ಆಧುನಿಕ ಜಗತ್ತು...


ಈ ಬೃಹತ್ ಜಗದಲ್ಲಿ ಹುಲುಕಡ್ಡಿ ಈ ಮಾನವ...
ಪ್ರಗತಿಯ ಭರದಲ್ಲಿ ಅವನತಿಯತ್ತ ಸಾಗುತಿರುವ...
ಕೆಲ ವರ್ಷಗಳ ಹಿಂದೆ.. ಮಾನವನಿಗಿತ್ತು ಏನೇನೋ ಕಲ್ಪನೆ
ಆದರೆ ಇಂದು ಇದೆ.. ಎಲ್ಲ ಕಣ್ಣ ಮುಂದೆನೇ

ಅತಿಯಾಯ್ತು ಈ ಮಾನವನ...
ಮುಂದುವರಿದ ತಂತ್ರಜ್ಞಾನ...
ಮುಂದುವರಿಯುತ್ತಾ ಕಳೆದುಕೊಳ್ಳುತ್ತಿದ್ದಾನೆ
ತನ್ನದೇ ಸ್ವಂತಿಕೆಯನ್ನ..

ಮಾನವ ಪೂರೈಸಿಕೊಳ್ಳಲು ತನ್ನ ಆಸೆಯನ್ನು
ಕಡಿಯುತ್ತಾ ಬಂದ ಸುಂದರ ಕಾಡನ್ನು
ಹೀಗೆಯೇ ಮುಂದುವರಿದರೆ..
ನಾಶವಾಗುವುದು ಜೀವ ಸಂಕುಲ
ಪ್ರಕೃತಿ ಸಮತೋಲನ ತಪ್ಪಿದರೆ
ಉಂಟಾಗುವುದು ಅಲ್ಲೋಲ ಕಲ್ಲೋಲ

ಬೆಳೆಯುತ್ತಿದ್ದಾನೆ ಯಂತ್ರ ಮಾನವ
ಹುಟ್ಟು ಹಾಕಿರುವುದು ಈ ಹುಲು ಮಾನವ
ಅದಕೆ ಬೇಕಾದ ಶಕ್ತಿಯನ್ನೆಲ್ಲ ಕೊಡುವ
ತನ್ನ ಅಂತ್ಯಕ್ಕೆ ಮುಹೂರ್ತ ಮಾಡಿರುವ

ಈ ಆಧುನಿಕ ಲೋಕದಲ್ಲಿ
ಬದಲಾಗಿದೆ ಜೀವನ ಶೈಲಿ
ಪ್ರಕೃತಿಯನ್ನು ಎದುರು ಹಾಕಿಕೊಂಡಲ್ಲಿ
ಮಾನವನಿಗಿಲ್ಲ ಉಳಿಗಾಲವಿಲ್ಲಿ

ಪ್ರಯತ್ನ ಪಡುತಿರುವನು ಸಾವನ್ನು ಗೆಲ್ಲಲು
ಆದರದು ಸಾಧ್ಯವಾಗದು ಯಾರಿಂದಲೂ
ಹೀಗೆ ಮುಂದುವರಿದರೆ ತಂತ್ರಜ್ಞಾನ.. ಒಂದಲ್ಲ ಒಂದು ದಿನ..
ಕಾಣಬಹುದು ಮಾನವನ.. ದುರಂತ ಅವಸಾನ...

ಇಂತಿ,
ನಾಗೇಶ್ ... :)

Sunday, 6 July 2014

> ಗುಂಡನ ಕಥೆ ....


ಕಾಲೇಜಿನಲ್ಲಿ ಓದುವ ಗುಂಡ
ಸಿಗರೇಟು ಸೇದುವ ಅಭ್ಯಾಸ ಮಾಡಿಕೊಂಡ
ಇದ ಕಂಡ ಪ್ರಿನ್ಸಿಪಾಲರು
ಕರೆದು ಬುದ್ಧಿ ಹೇಳಿದರು...

ಯಾರೇನೆ ಅಂದರೂ
ಬಿಡಲಿಲ್ಲ ಗುಂಡ ಸಿಗರೇಟನ್ನು
ಅದಕ್ಕೆ ಪ್ರಿನ್ಸಿಪಾಲರು
ಕರೆಸಿದರು ಗುಂಡನ ತಂದೆಯನ್ನು....

ಈ ನಮ್ಮ ಪ್ರಿನ್ಸಿಪಾಲರು
ಗುಂಡನ ತಂದೆಯನ್ನು ಕೇಳಿದರು
ನಿಮ್ಮ ಮಗ ಸಿಗರೇಟು ಸೇದುವನು
ನೀವದನ್ನು ಕೇಳಲ್ವೇನು??

ಅದಕೆ ಗುಂಡನ ತಂದೆ :
ನಾನು ಬಹಳ ಸಲ ಕೇಳಿರುವೆನು
ಕೇಳಿ ಕೇಳಿ ಸುಸ್ತಾಗಿರುವೆನು
ಎಷ್ಟೇ ಕೇಳಿದರೂನೂ
ನಂಗೆ ಕೊಡಲ್ಲ ಅಂತಾನೆ ಅವನು...!!!!


ಇಂತಿ,
ನಾಗೇಶ್ .. :)

Monday, 23 June 2014

> ಮನದಾಸೆ...


ಜಗವೊಂದು ಚೆಂಡು....
ಆಗಿಹುದು ಗುಂಡು...
ಅದ ಮಾಡಿ ತುಂಡು ತುಂಡು...
ಎಲ್ಲರೂ ಹೇಳುವರು ತಮ್ಮದೆಂದು....

ಅದ ಮಾರುವರು ಹಣವ ಕೊಂಡು..
ಇನ್ಯಾರೋ ಅದನ್ನು ತೆಗೆದುಕೊಂಡು...
ಮನೆಯೊಂದ ಕಟ್ಟಬೇಕೆಂದುಕೊಂಡು...
ಮೈತುಂಬಾ ಸಾಲವ ಮಾಡಿಕೊಂಡು...
ಆ ಸಾಲದಿಂದ ಮನೆಯ ಕಟ್ಟಿಕೊಂಡು...
ಸಾಲದಿಂದಾಗಿ ನೆಮ್ಮದಿ ಕಳೆದುಕೊಂಡು...
ಬರಡಾಗುವುದೀ ಹಾಳು ಜೀವನ...
ಮನದ ಆಸೆಯೇ ಇದಕೆಲ್ಲ ಕಾರಣ....


ಬುದ್ಧನೆಂದಿಹನು ... ಆಸೆಯೇ ದುಃಖಕ್ಕೆ ಮೂಲ....
ಹಾಗೆಂದು ಆಸೆಪಡಲೇಬಾರದಂತಲ್ಲ.....
ಕಾಲು ಚಾಚು ನೀ ಹಾಸಿಗೆಯಿದ್ದಷ್ಟು...
ಅದರಲ್ಲೇ ತೃಪ್ತಿಪಡು ಸಾಗರದ ನೀರಷ್ಟು...


ಇಂತಿ,
ನಾಗೇಶ್ ... :)

Monday, 16 June 2014

> ಆಸೆ....

ಆಸೆ ಆಸೆ ಆಸೆ....
ಆಸೆ ತರುವುದು ನಿರಾಸೆ...
ಈಗಿರುವ ಚಿಕ್ಕ ಆಸೆ...
ಮುಂದಾಗಬಹುದು ದುರಾಸೆ...
ಕಾಲವಿದು ಕಲಿಗಾಲ...
ಗೆಲ್ಲುವುದು ಸುಲಭವಲ್ಲ...

ದುರಾಸೆಗೆ ಕಾರಣವೇನು...??
ಆ ಭಗವಂತನೇ ಹೇಳಿರುವನು...
ಅದು ಹೆಣ್ಣು, ಹೊನ್ನು, ಮಣ್ಣು....
ಅದೆಂದೂ ಬದಲಾಗದಿನ್ನು...
ರಾಮಾಯಣಕೆ ಕಾರಣ ಹೆಣ್ಣು..
ಕುರುಕ್ಷೇತ್ರಕ್ಕೆ ಕಾರಣ ಮಣ್ಣು...

ಒಂಥರಾ ಹುಳಿಹಣ್ಣು...
ಈ ಹೆಣ್ಣು, ಹೊನ್ನು, ಮಣ್ಣು...
ಹೆಚ್ಚು ಪಡೆಯಲು ಹೋಗಿ ಈ ಮೂರನ್ನು...
ವ್ಯರ್ಥ ಮಾಡಬೇಡಿ ನಿಮ್ಮ ಸಮಯವನ್ನು

ಇದಕೆ ಅತಿಯಾಸೆ ಪಟ್ಟವರು...
ಇಂದು ಜೈಲಿಗೆ ಹೋಗಿಹರು...
ದುಡಿದರೆ ಹರಿಸಿ ಬೆವರು...
ಜೀವನದಲ್ಲಿ ಉನ್ನತಿ ಪಡೆಯುವರು...


ಇಂತಿ,
ನಾಗೇಶ್ ... :)