Sunday 23 April 2017

ಕಲಿಗಾಲ ಸ್ವಾಮಿ... ಕಲಿಗಾಲ...

ಜನುಮ ಜನುಮಾಂತರದ ಕರ್ಮಗಳ ಸರಮಾಲೆ..
ಬಂದಿಹುದು ಮಾನವ ಜನ್ಮಕ್ಕೆ ಕರೆಯೋಲೆ..
ಮೊದಲಡಗಿ ತಾಯಿಯ ಗರ್ಭದ ಮರೆಯಲ್ಲಿ..
ಮರುಹುಟ್ಟು ಪಡೆವ ಜೀವ ತಂತಾಯಿಯ ಮಡಿಲಲ್ಲಿ..

ಚಾತಕಪಕ್ಷಿಯಂತೆ ಕಾದು ಜನನದ ಘಳಿಗೆಗೆ..
ತಯಾರಾಗುವ ಜಾತಕ ನಾಳೆಯ ಒಳಿತಿಗೆ..
ಬದಲಾಗುತ್ತಿದ್ದರೂ ಈಗಿನ ಪೀಳಿಗೆ..
ಬಿಟ್ಟಿಲ್ಲ ಮಾತ್ರ ಜ್ಯೋತಿಷ್ಯದ ನಂಬುಗೆ..

ಕಲಿಗಾಲವಿದು ಸ್ವಾಮೀ ಕಲಿಗಾಲ..

ಕಣ್ಣ ಎದುರಿನ ದಿಟವ ನಂಬದ ಈತ..
ಕಣ್ಣಿಗೊತ್ತಿಕೊಳ್ಳುವನು ಮೂಢನಂಬಿಕೆಯ ಭೂತ..
ಇದಕೆ ಮಾಡಿಯೂ ಸಾಲ, ಹೊಂಡಕ್ಕೆ ಬಿದ್ದಾತ..
ಹೇಳಿದರೂ ಕೇಳದ ಈತ, ಸಮಾಜದ ಪೆಡಂಭೂತ..

ಕಲಿಗಾಲವಿದು ಸ್ವಾಮೀ ಕಲಿಗಾಲ..

ಶಿಕ್ಷಣವು ನಡೆಯಿತಿದೆ ಹಣದ ಹಾಸಿನ ಮೇಲೆ..
ಎಲ್ಲಿ ನೋಡಿದರಲ್ಲಿ ಕಾಂಚಾಣನದೇ ಲೀಲೆ..
ಈ ಮುಂಚೆ ಹೀಗಿತ್ತು ಸರಕಾರದ ಘೋಷಣೆ..
ಎಲ್ಲರೂ ಕಲಿಯೋಣ.. ಎಲ್ಲರೂ ಬೆಳೆಯೋಣ..
ಪರಿಸ್ಥಿತಿ ನೋಡಿದರೆ ಬದಲಾಗಿದೆ ಘೋಷಣೆ..
ಹಣವನ್ನು ಕಕ್ಕೋಣ.. ಶಿಕ್ಷಣವ ಪಡೆಯೋಣ..

ಕಲಿಗಾಲವಿದು ಸ್ವಾಮೀ ಕಲಿಗಾಲ..

ಬಡವರಿಗೆ ಸೂರಿಲ್ಲ.. ಸಿರಿತನಕೆ ಕೊನೆಯಿಲ್ಲ..
ಸತ್ತು ಬದುಕುವ ರೈತ.. ಅನ್ನವನು ಬೆಳೆವಾತ..
ತಿಂದುಳಿದದ್ದನ್ನೆಸೆದು ತೇಗುವ ಸಿರಿವಂತ..
ಕಲಿಗಾಲವಿದು ಸ್ವಾಮೀ ಕಲಿಗಾಲ..