Friday, 31 July 2015

ಮಳೆಗಾಲದ ಮುಂಜಾನೆ....

ಮನದಲ್ಲಿ ಮಾನಿನಿಯು ಮೌನದಲಿ ಮಲಗಿರಲು
ಮಾಮರದ ಮರೆಯಲ್ಲಿ ದನಿಯೊಂದು ಮೂಡಿತ್ತು
ಮೂಡಣದಿ ಮುಂಜಾನೆ ರವಿಮಾಮ ಮೇಲೆದ್ದಿರೆ
ಮೋಡದ ಮುಸುಕಲ್ಲಿ ಬಿಸಿಲು ಮಂಕಾಗಿತ್ತು

ಮಂದವಾಗಿದೆ ಬಾನಿದು ಇಂದು..
ಅಂದವಾಗಿದೆ ಮೋಡವು ಬಂದು..
ಮೋಡದ ಎಡೆಯಿಂದ ಕಿರಣದ ಅಲೆಯೊಂದು..
ಬಂದು ಬಿದ್ದಿರೆ ಮನದ ಕದದ ಮೇಲಿಂದು...
ನೋಡುತಿರೆ ಮೂಡಣದಿ ದಿನಕರನ ದಿನಚರಿಯ..
ಹರಿಣದಂತೆ ಎದೆಯಲ್ಲಿ ಕುಣಿದಾಡುವ ಹೃದಯ..

ಮಳೆಗಾಲದ ಮಾಸವಿದು ಮೋಡಗಳು ಮಾಮೂಲು..
ಕಾರ್ಮೊಡವು ಮೇಲೆದ್ದಿರೆ ಮಳೆಯ ಮೆಲುಕು ಮನದಲ್ಲೂ..
ಮಳೆಯ ಆಗಮನಕೆ ಮೋಡದೆಡೆ ಮುಖ ಮಾಡಿರಲು..
ಮನದ ಮನೆಯಲ್ಲಿ ಮೆಲ್ಲನೆ ಕಮರಿತ್ತು ಮಂಪರು..

ಕನಸುಗಳ ಕಾಡಲ್ಲಿ ಕೊಂಚ ಕೊರೆದ ಕಲ್ಲಿನ ಕೆಳಗೆ ಕುಳಿತು
ಕತ್ತನೆತ್ತಲು ಕಂಡೆ ಕಾಮನಬಿಲ್ಲ ಕೈಚಳಕ....
ಕಾರ್ಮೋಡದ ಕಡಿದಾದ ಕಣಿವೆಯಲಿ
ಇಣುಕಿ ಕಿರುನಗುವ ಓಕುಳಿಯ ಕಂಡು ಮೈಪುಳಕ...

ಕಾರ್ಮೋಡದ ಮರೆಯಿಂದ ಮಳೆಹನಿಯು
ಕಾಮನಬಿಲ್ಲಲ್ಲಿ ಮುಳುಗೆದ್ದು ಧುಮುಕುತಿರೆ
ಮರದೆಲೆಯಡಿ ಮೊರೆಯಿಡುತ್ತಿತ್ತೊಂದು ಮರಿಹಕ್ಕಿಯು 
ತನ್ನಮ್ಮ ಮನೆಗಿನ್ನೂ ಮರಳಿಲ್ಲವೆಂದು...

ಇಂತಿ,
ನಾಗೇಶ್ :)